ಗಣೇಶ ತಾಂಡವ ಕಾವ್ಯ
ಶಿವನ ಶೂಲದಿರಿತಕೊರಗಿ ಗಜನ ಶಿರವನಿರಿದು ತಂದು ಕೊರಳೊಳಿರಿಸುತಲೆದ್ದು ಬಂದ ಮುದ್ದು ಕಂದ ಗಣಪ | ಪಿರುದುದಾಕರ್ಣವೇನ್ ಚಂದ ಕಿರಿನಯನದಾನಂದ ನೀಳನಾಸಿಕವುದರ ಬ್ರಹ್ಮಾಂಡ ವಕ್ರತುಂಡ ಬೆನಕ ||೧|| ಜ್ವಲಿಸುತಾಖಂಡಮಂಡಲ ಕೆಡುಹಿ ಮೂಷಕನತಿಭಂಡ ಅಂಕ ಬಿಂಕ ಡೊಂಕ ಡಂಭ ಮುರಿದು ಗೆಲಿದ ವೀರ| ಋಷಿಜನ ಸುರರತಿಭಯ ಭಯ ವಿನಾಶಕ ನಲಿದ ಢಮ ಢಮ ಢಮರನಿನಾದ ಜಯ ಜಯಹೇ ರಿಪುಸಂಹಾರ ||೨|| ಗಣಪತಿ ಸೋದರ ಶರವಣ ಕೂಡಿ ವಾಹನವೇರಿ ಜಗಜಗದಗಲ ತಿರುಗೀಕ್ಷಿಪ ಪರಿಯದು ನೋಡಿ | ಶಿವಶಿವೆಗೆರಗಿ ತಾ ಕರಮುಗಿದು ಪದಪಿಡಿದು ಅಂಡ ಪಿಂಡ ಬ್ರಹ್ಮಾಂಡವೈ ನೀವೆಂದ ಮೊದಲ್ವಂದಿತ ||೩|| ಅರಿಗಳೆಂಟು ಮನುಜ ಮನದಿ ಮನೆಯ ಮಾಡಿ ಮೇಲೆ ಬಿದ್ದು ಮೇಧೆ ಮೆದ್ದು ಮತಿ ಮಂದವಾಗಿ | ಮಮ ಕಾಮ ಮದ ಮೋಹ ಮತ್ಸರ ಕ್ರೋಧ ಲೋಭಾಹಂಗಳರಿದು ತರಿದ ತಾಂಡವ ಗಣಪ || ೪ || ಬಂಡಿ ಬಂಡಿ ಬಂಡಿ ತಿಂಡಿ ಭಕ್ಷ್ಯ ಭೋಜ್ಯವೆಲ್ಲವುಂಡು ಗುಂಡುಗುಂಡುಗಾಗಿ ಎಡವಿಬಿದ್ದು ಧಿಗ್ಗನೆದ್ದ ಸುಂದರ | ಹಾವ ಪಿಡಿದು ಗಟ್ಟಿಯಾಗಿ ಉದರ ಬಿಗಿದು ಗೇಲಿಮಾಳ್ಪ ಚಂದ್ರಮಗೆ ಶಾಪವಿತ್ತು ನಶಿಪ ಪರಶುಪಾಶಧರ ||೫|| ಗಣ ಗಣವಗಣಿತ ಶಿವಗಣ ಭೂತಗಣಗಳ ಕೂಡಿ ಅಸುರರೆದೆ ಬಗೆದು ಮೂಜಗವ ಕಾಯ್ವ ಗಣನಾಯಕ | ಧಿಕ್ ತಕಿಟ ಧಿಕ್ ತಕಿಟ ಧಿಕ್ ತಕಿಟ ತಾಂಡವನಾದ ತಕ ತಕಿಟ ತಾನಲಿದ ಪರಶಿವನೊಲವ ವಿನಾಯಕ ||೬|| ಗಂಗೆಗೌರಿಯೊಲವ ಕಂದ ಚೆಂದ ಬೆನಕನ ವಿಧ ವಿಧ ಪರಿ ಪರಿ ಸುತಿಸಿರೊಲಿವಳಮ್ಮ ಲಕುಮಿ | ಜಪ ತಪ ಬಲು ಬಕುತಿಯಲಿ ಧೇನಿಸಿ ಬೇಡಿರೆ ಹರುಷ...