ತಲೆಬೈಲು ನರಸಿಂಹ
ಶರಣ ಶರಣು ಹೇ ನರಸಿಂಹ ಭಕ್ತವತ್ಸಲ ತಲೆಬೈಲು ನರಸಿಂಹ ||ಪ|| ನಖ ತೀರ್ಥದಲಿ ಮಿಂದು ವನಕುಸುಮ ಮಾಲೆಯ ಧರಿಸಿ | ತಲೆಬೈಲು ಮಠದೊಳು ನಿಂದೆ ಮೊರೆಯೊ ಬಕುತರನು ಉದ್ಧರಿಸಿ ||೧|| ಇಹವ ಬೆಳಗಲು ನಿನಗಿಹುದು ಮಾತೆ ದುರ್ಗಾದೇವಿಯ ಮಡಿಲು | ಆಲಯದ ಕಾವಲಿಗಿಹುದು ಖಗರಾಜ ಗರುಡನ ಕರವು ||೨|| ಕಾಣಿಯೂರ ಯತಿ ಭಜಿಸಿ ತಪವ ಮಾಡಿದರು ಓ ನರಸಿಂಹ | ಧೂಪ ದೀಪಾರತಿ ಬೆಳಗಿ ಕೊಂಡಾಡಿದರೋ ದಿವ್ಯಸಿಂಹ ||೩|| ವಿಷ್ಣು ದೇವನ ಬಾಲಬಿಂಬದಿ ಮೈದಳೆದ ಉಗ್ರ ನರಸಿಂಹ | ಭವದ ಬವಣೆ ಕಳೆಯೋ ಪ್ರಹ್ಲಾದಪಾಲಕ ನರಸಿಂಹ ||೪|| ನರಹರಿಯ ಸೇವೆ ಮಾಡುತ ಧನ್ಯ ತಾನಾಗಿಹನು ಮುಖ್ಯಪ್ರಾಣ | ಹರಿಯ ಪವಮಾನ ಪೂಜೆಗೆ ಒಲಿದು ಹರಸಿ ಕಾಯ್ವನು ಹನುಮ ||೫|| ಗೋಪಾಲಕೃಷ್ಣನು ನೀನೇ ಪ್ರಭುವೇ ನೀ ವೆಂಕಟರಮಣ | ಚರಣ ಸೇವೆಯ ಭಾಗ್ಯವನು ಕರುಣಿಸು ಹೇ ಲಕ್ಷ್ಮೀರಮಣ ||೬|| ಕೆಂಡನಯನನೇ ಆದರೇನು ಹರಿಸುವೆಯೊ ಮಮತೆಯ ಕಡಲು | ಸಿಂಹವದನ ಕರಾಲನೂ ನೀನು ಬಕುತರಿಗೆ ಪ್ರೇಮದ ಒಡಲು ||೭|| ಭಾವ ಶುದ್ಧದಲಿ ಪದತಲಕೆ ಶರಣು ನಾನಾಗಿಹೆ ಅಗ್ನಿಲೋಚನ | ಕರುಣದಿಂದಲಿ ಕರಪಿಡಿದು ಎನ್ನ ಕಾಯೋ ಕಶಿಪುಶಾಪವಿಮೋಚನ ||೮|| ಪದ ಪದ ಸಾಲನು ಪೋಣಿಸಿ ಮಾಲೆ ಮಾಡಿಹೆನೋ ಯೋಗನಂದನ | ಕವಿತೆಯಿದ ತುಲಸೀ ಹಾರವೆಂದರಿತು ಪಯಣಿಗನ ಕಾಯೋ ದಿವ್ಯನಂದನ ||೯|| - ಪ್ರಕಾಶ ಪಯಣಿಗ