ಜಯತು ಜಯತು ವಿಷ್ಣುಮೂರ್ತಿ
ಮರುಗದಿರು ಮರುಗದಿರು ಓ ಮಾನವ ಇಳೆಗೆ ಬೆಳಕಾಗಿ ಇಳಿದಿಹನು ಮಾಧವ ||ಪ|| ಶ್ಯಾಮಲೆಯ ಮಡಿಲಲ್ಲಿ ಪಯಸ್ವಿನಿಯ ತಟದಲ್ಲಿ ಕರುಣದಿಂದಲಿ ಪೊರೆಯುತಾ ನೆಲೆಸಿಹನು ದೇವದೇವ ವಿಷ್ಣುದೇವ ||೧|| ಕುಂಟಾರಿನ ಪುರದಲ್ಲಿ ಪಾಡಿಬರುವ ಮನದಲ್ಲಿ ಬೆಳಕು ತಾನಾಗಿ ಹೊಳೆದಿಹನು ಭುವಿಸಿರಿಗೊಡೆಯ ಜಗದೀಶ ||೨|| ಜಲನಿಧಿಯ ಅಲೆಯಲ್ಲಿ ತರುಲತೆಯ ಕೊರಳಲ್ಲಿ ಝುಳು ಝುಳು ನಾದ ಕುಹೂ ಕುಹೂ ಗಾನ ಹರಿ ನಿನ್ನ ಧ್ಯಾನ ||೩|| ನೇಸರನ ಕಿರಣದಲಿ ತಂಬೆಲರ ಸ್ಪರ್ಶದಲಿ ಗೋವಿಂದ ನಿನ್ನ ನಾಮ ಅದು ಓಂಕಾರ ನಾದ ಶ್ರೀಕಾರ ನಾದ ||೪|| ಪುರಜನರು ಮನಸಿನಲಿ ಭಕ್ತಿ ಭಾವ ತುಂಬುತಲಿ ಭಜಿಸಿ ಪ್ರಾರ್ಥನೆಯ ಮಾಡುತಿರೆ ಕೃಪೆದೋರುವೆ ಓ ಜಗನ್ನಾಥನೇ ||೫|| ಅಗಣಿತ ಭಕ್ತರ ಸಲಹುತಲಿ ಮಮತಾ ಸುಧೆ ಹರಿಸುತಲಿ ತಂದೆ ನೀ ತಾಯಿ ನೀ ಬಳಗ ನೀ ಜಗದೇಕ ಬಂಧು ಕರುಣಾ ಸಿಂಧು ||೬|| ಶರಣಾಗತರನು ಕಾಯುತಲಿ ವಾಂಛಿತ ಫಲವೀಯುತಲಿ ಭಕ್ತವತ್ಸಲ ನೀನಿರಲು ದಾಸ ನಾ ನಿನಗೆ ಆದಿದೇವನೆ ||೭|| ಕರಮುಗಿದು ವಂದಿಪೆನು ಹರಿ ನಿನ್ನ ಚರಣದಲಿ ಕಾಪಾಡು ನೀ ಎನ್ನ ಮರುಕದಲಿ ಮದುಸೂದನ ನಾರಾಯಣ ಲಕ್ಷ್ಮೀನಾರಾಯಣ ||೮|| ಬಾಲ ಭಾಷೆಯಲೀ ಕವನ ನಾರಾಯಣನ ಗಾನ ಕುಣಿಕುಣಿದು ಕೇಳಿ ಪಯಣಿಗನ ಹರಸೋ ಕುಂಟಾರು ಪುರದೀಶ ||೯|| - ಪ್ರಕಾಶ ಪಯಣಿಗ