Posts

Showing posts with the label vijnana

ತಾಯಿ ಜಗದಂಬೆ

Image
ಧಮನಿ ಧಮನಿ ಮನ ಮಿಡಿದು ಕುಣಿದು ಪಾಡಿತು ಎನ್ನ ಮನದಣಿಯೆ | ಹೃದಯ ಮಂದಿರ ನಂದಾ ದೀಪವು ಜಗದಂಬೆಯ ಪದಕೆ ಮಣಿಯೆ ||೧|| ಕಾರ್ಮುಗಿಲ ಕರಿ ನೆರಳಿನ ಭಯವು ಬೆಂಬಿಡದೆ ಕಾಡಿ ಕೊಲುತಿದೆ | ಓಂಕಾರ ನಾದ ಶರವಾಗಿ ಮುತ್ತಿ ಕಾರಿರುಳ ಕಳೆದು ಬೆಳಗಿದೆ ||೨|| ಭವದ ಕಡಲೊಳು ವಿಕಟ ಅಲೆ ನಡುವೆ ಮುಳುಗಲೆನ್ನ ಹಾಯಿದೋಣಿ | ಜಗ ಪೊರೆವ ನಿನ್ನ ನಾಮ ಬಲ ಪಿಡಿದು ದಡ ಸೇರಿದೆ ನಾರಾಯಣಿ ||೩|| ಧ್ಯಾನವು ಪೂಜೆಯು ನಾ ಅರಿಯೆ ತಾಯಿ ತಂತ್ರವೋ ಮಂತ್ರವೋ | ಉಸಿರು ಉಸಿರಿನಲಿ ಮಾತೆ ಜಗದಂಬೆ ಒಲುಮೆ ಕರುಣೆ ಮಾತ್ರವೋ ||೪|| ಲೌಕಿಕವು ಕಳೆದು ತನು ಮನ ಆತ್ಮ ಶುದ್ಧ ಚಿತ್ತ ಸ್ಫಟಿಕ ಮಣಿ | ಮನ ಹೊಳೆವ ಪುಷ್ಪ ಮಂದಾರ ಕಮಲ ನೀನಿರಲು ವಾಣಿ ಶರ್ವಾಣಿ ||೫|| ಜನುಮ ಮರು ಜನುಮ ನರ ಜನುಮ ಸಾಕು ಸಾಕಿನಿತು ಹರಣದ ಮರಣ | ಪೊಡಮಡುವೆ ತಾಯಿ ಶಾಂಕರಿ ಶಾರದೆ ಶಾಂಭವಿಯ ಪದುಮ ಚರಣ ||೬|| ಪದಕುಸುಮ ಮಾಲೆ ಜಪವಿದುವೆ ಗಾನ ಬಕುತಿಯಿದು ಮುಕುತಿ ಮಾರ್ಗ| ಶರಣು ಶರಣೆಂಬೆ ಕರುಣದಿ ಒಲಿಯೇ ನೀ ಪಯಣಿಗಮಾತೆ ದುರ್ಗಾ ||೭|| - ಪ್ರಕಾಶ್ ಪಯಣಿಗ