ಮುಕ್ತಿರೂಪ ಅಯ್ಯಪ್ಪ

ಪರಬ್ರಹ್ಮ ತತ್ವ ಸಾಕ್ಷಾತ್ಕಾರದ ಬೆಳಕು ನೀಡೋ
ಲೌಕಿಕದ ಮೋಹ ಕಳೆವ ಗುರುವೇ ಅಯ್ಯಪ್ಪ ||ಪ||

ಶ್ರೀಹರಿಯು ಚೆಂದದಲಿ ಮೋಹಿನಿಯಾಗೆ
ಮದನಾಂತಕ ಹರನು ಮೋಹಿತನಾಗಿ
ಯೋಗಶಕ್ತಿಗಳೆರಡು ಕೂಡಿ ಒಂದಾಗಿ
ರೂಪ ತಳೆದ ಮಹಾಶಕ್ತಿ ಸ್ವಾಮಿ ಅಯ್ಯಪ್ಪ ||೧||

ಯೋಗದಲಿ ಯೋಗಿ ಯೋಗೇಶ್ವರನು
ಯೋಗನಿದಿರೆಯಲಿ ಹರಿ ಯೋಗಮಾಯೆ
ಯೋಗ ಯೋಗಗಳು ಯೋಗದಲಿ ಏಕವಾಗೆ
ಜನಿಸಿದ ಮಹಾಯೋಗಿಯೇ ಸ್ವಾಮಿ ಅಯ್ಯಪ್ಪ ||೨||

ಸರ್ವಗುಣಸಂಪನ್ನ ಭಾವುಕನು ಹರಿಯು
ತಪೋನಿರತ ಭಾವಾತೀತನೂ ಹರನು
ಭಾವ ಗುಣಗಳೆಲ್ಲವು ತಪದಲೊಂದಾಗಿ
ಗುಣಭಾವದಾಚೆಯ ಪರತತ್ವ ನೀನೇ ಅಯ್ಯಪ್ಪ ||೩||

ಗುಣಾವಗುಣಗಳೆಲ್ಲವ ಮನದೊಳಿಟ್ಚು
ಮನುಜಕುಲ ತಾ ನಿರ್ಭಾವುಕತೆಯ ಬಿಟ್ಟು
ತಾನೆಂಬ ಅಹಂಭಾವದೊಳು ಬೀಗಿರಲು
ಕಣ್ತೆರೆದು ಅರಿವ ಬೆಳಕು ಮೂಡಿಸೋ ಅಯ್ಯಪ್ಪ ||೪||

ಭೂಮಿ ಭೂಮಿಯನೆ ಸೆಳೆದು ಕೂಡಿ
ತುಂಡು ಇಳೆಗೆ ಬಂಧ ಮುರಿದು ಕಾಡಿ
ಸೌಧ ಕಟ್ಟಿ ಬಂಧಿಯಾಗಿಕೊಂಬ ಜನಕೆ
ಭೂಮಿ ಉಸಿರ ನಂಟು ಕಾಣಿಸೋ ಅಯ್ಯಪ್ಪ ||೫||

ಬೆಳ್ಳಿ ಬಂಗಾರ ವೈಢೂರ್ಯ ರಾಶಿ
ಸಂಪದವ ಶೇಖರಿಪ ಮನದ ಖುಷಿ
ಮರುಳು ಚಿತ್ತದಲಿ ಅರಿವು ಮೂಡಿಸೋ
ಬಕುತಿ ಸಂಪದ ಅನಂತವದು ಅಯ್ಯಪ್ಪ ||೬||

ಮೋಹ ಮೋಹವೆಲ್ಲ ಕ್ಷಣಿಕವೋ
ಬಂಧ ಸಂಬಂಧವೆಲ್ಲ ಮರುಳೋ
ಮೋಹ ಬಂಧದ ಮರುಳ ಕಳೆದು
ಮನುಜ ಮನಕೆ ಬೆಳಕಾಗೋ ಅಯ್ಯಪ್ಪ ||೭||

ಬಂಧ ಮೋಹ ಪಾಶ ಕಳೆದು
ಇಹದ ವಾಂಛೆಗಳೆಲ್ಲ ಅಳಿದು
ಶರಣು ಶರಣೆನುತಲಿ ಪದಕೆರಗೆ
ಕೈಲಾಸ ವೈಕುಂಠಕೆ ಒಯ್ಯೋ ಅಯ್ಯಪ್ಪ ||೮||

ಹರಿಹರ ಸುತ ಮಹಾಶಾಸ್ತ್ರನೇ ಅಯ್ಯಪ್ಪ
ಮಂತ್ರವೇದಿ ಮಹಾವೇದಿ ತಪಸ್ವಿಯೇ ಅಯ್ಯಪ್ಪ
ಅಶ್ವಾರೂಢ ಗಜಾರೂಢ ಸಿಂಹಾರೂಢನೇ ಅಯ್ಯಪ್ಪ
ಪಾಪನಾಶಕ ಭಕ್ತವತ್ಸಲನೇ ಶರಣಂ ಅಯ್ಯಪ್ಪ ||೯||

ಪದ ಪದಾಭಿವಂದನೆಯೂ ಅಯ್ಯಪ್ಪ
ಅಕ್ಷರ ಹೂವ ಮಾಲೆ ನಿನಗೇ ಅಯ್ಯಪ್ಪ
ಪಯಣಿಗನ ಕಾವ್ಯವೇ ನೈವೇದ್ಯ ಅಯ್ಯಪ್ಪ
ಚೇತನಕೆ ಮುಕುತಿ ಪ್ರಸಾದ ನೀಡೋ ಅಯ್ಯಪ್ಪ ||೧೦||

- ಪ್ರಕಾಶ ಪಯಣಿಗ

Comments