ಹೈಜೆನಿಕ್ (ನೈರ್ಮಲ್ಯ) ಎಂಬ ಭ್ರಮಾಭೂತ...


ಕಾಲ ಆಧುನಿಕತೆಯ ಓಘಕ್ಕೆ ಸಿಲುಕಿ ಶರವೇಗದಲ್ಲಿ ಚಲುಸುತ್ತಿರುವ ಮಧ್ಯೆಯೇ ಮಾನವನ ಮನಸ್ಸಿನಲ್ಲಿ ಹಲವು ರೀತಿಯ ಭ್ರಮೆಗಳು ವಕ್ಕರಿಸುತ್ತಿವೆ. ಹಣದ ಭ್ರಮೆ, ಐಷಾರಾಮದ ಭ್ರಮೆ, ಆರೋಗ್ಯದ ಭ್ರಮೆ, ಹಾಗೆಯೇ... ಹೈಜೆನಿಕ್ ಅರ್ಥಾತ್ ನೈರ್ಮಲ್ಯದ ಭ್ರಮೆ... ವಿವಿಧ ಬ್ರಾಂಡ್ ನ ಕಂಪನಿಗಳು ತಾವು ತಯಾರಿಸಿದ ವಿಭಿನ್ನ ಉತ್ಪನ್ನಗಳಿಗೆ ಮಾರುಕಟ್ಟೆ ಪಡೆಯಲೋಸುಗ ಸೃಷ್ಟಿಸಿದ ಭ್ರಮೆಗಳು ಇವೆಲ್ಲ... ಔಷಧಿ ತಯಾರಿಕಾ ಕಂಪನಿಗಳು ಆರೋಗ್ಯ ಭ್ರಮೆ ಸೃಷ್ಟಿಸಿದರೆ, ಸೋಪು, ಪ್ಲಾಸ್ಟಿಕ್ ವಸ್ತುಗಳ ತಯಾರಿಕಾ ಕಂಪನಿಗಳು ನೈರ್ಮಲ್ಯದ ಭ್ರಮೆ ಸೃಷ್ಟಿಸಿವೆ. ಆ ಭ್ರಮೆಯಲ್ಲಿ ಮುಳುಗಿದ ಮಾನವ ಇರುವ ಆರೋಗ್ಯ, ನೈರ್ಮಲ್ಯವನ್ನೂ ಕಳೆದುಕೊಳ್ಳುತ್ತಿರುವುದು ಮಾತ್ರ ಅರಿವಿಗೇ ಬರುತ್ತಿಲ್ಲ.

ಪ್ರತಿಯೊಂದು ಜೀವಿಗೂ ಇರುವ ಮಧುಮೇಹ (ಶುಗರ್), ರಕ್ತದೊತ್ತಡ(ಬಿಪಿ)ವನ್ನೇ ದೊಡ್ಡ ರೋಗವಾಗಿ ಪರಿವರ್ತಿಸಿ ದಿನನಿತ್ಯವೂ ಗುಳಿಗೆ ತಿನ್ನುವಂತೆ ಮಾಡಿದೆ ವೈದ್ಯಜಗತ್ತು. ಔಷಧಿ ತಯಾರಿಕಾ ಕಂಪನಿಗಳು ಮತ್ತು ವೈದ್ಯಜಗತ್ತು ಸೃಷ್ಟಿಸಿದ ಭ್ರಮೆಗಳ ಕುರಿತು ಮಾತಾಡಲು ಹೊರಟರೆ ವರುಷವಾದರೂ ಮುಗಿಯಲಿಕ್ಕಿಲ್ಲ. ಅದಿರಲಿ, ಈ ಹೈಜೆನಿಕ್ ಭ್ರಮೆಯ ಬಗ್ಗೆ ಸ್ವಲ್ಪ ವಕ್ರದೃಷ್ಟಿ ಬೀರೋಣ.
ಕೆಲ ತಿಂಗಳ ಹಿಂದೆ ಅಪರೂಪಕ್ಕೋ ಎಂಬಂತೆ ನನ್ನ ಸ್ನೇಹಿತನಿಂದ ಕರೆಬಂತು. ಕರೆ ಸ್ವೀಕರಿಸಿದರೆ ಅತ್ತಲಿಂದ ದುಃಖತಪ್ತ ಧ್ವನಿ. ಯಾಕೋ, ಏನಾಯ್ತೋ? ಎಂದು ವಿಚಾರಿಸಿದೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೇನೆ. ಹುಷಾರಿಲ್ಲ ಮಾರಾಯ. ಮೂಳೆ ಸವೆತ ಆಗಿದೆ. ಯಾಕೆ ಅಂತಾನೇ ಗೊತ್ತಾಗ್ತಿಲ್ಲ... ಅಂದ. ಯಾವುದಕ್ಕೂ ಒಮ್ಮೆ ನೋಡಿಕೊಂಡು ಬರೋಣವೆಂದು ಆಸ್ಪತ್ರೆಯತ್ತ ನಡೆದೆ. ನೋಡುತ್ತೇನೆ, ಸ್ನೇಹಿತನ ಎರಡು ಅಂಗೈಗಳೂ ಸವೆದಂತಿವೆ. ಬೆರಳುಗಳು ಹೇಳಿದ್ದನ್ನು ಕೇಳುತ್ತಿಲ್ಲ. ವೈದ್ಯರು ನಾನಾ ರೀತಿಯ ಉಪಚಾರಗಳನ್ನು ಮಾಡುತ್ತಿದ್ದಾರಾದರೂ ಫಲ ಮಾತ್ರ ಸಿಕ್ಕಿಲ್ಲ. ನನಗೆ ಸ್ನೇಹಿತನ ಬುದ್ಧಿ ಗೊತ್ತಿತ್ತಲ್ಲ.. ಕೆಣಕಿದೆ... ದಿನಕ್ಕೆ 150 ಬಾರಿ ಸೋಪು, ಹ್ಯಾಂಡ್-ವಾಶ್ ಹಾಕಿ ಕೈ ತೊಳೆದರೆ ಇನ್ನೇನಾಗುತ್ತೆ? ಅಂದೆ.

ಸ್ನೇಹಿತ ಬೆಚ್ಚಿಬಿದ್ದ. ಏನೋ ಹಾಗಂತೀಯಾ? ಕೈ ತೊಳೆದ್ರೆ ಹೈಜೆನಿಕ್ ಅಲ್ವೇನೋ? ಅದ್ರಿಂದ ರೋಗ ಬರುತ್ತಾ...? ಅಂತ ರಾಗ ಎಳೆದ. ಕೈ ತೊಳೆದ್ರೆ ಹೈಜೆನಿಕ್ ನಿಜ. ಹಾಗಂತ ದಿನಕ್ಕೆ 150 ಬಾರಿ ಕೈ ತೊಳೆದ್ರೆ ಹೈಜೆನಿಕ್ ಅಲ್ಲ. ಅದೊಂದು ಭ್ರಾಂತಿ. ಆ ಭ್ರಾಂತಿಯೇ ಈಗ ನಿನ್ನ ಮೂಳೆ ಸವೆತಕ್ಕೆ ಕಾರಣ. ದಿನಚರಿ ಬದಲಾಯಿಸಿಕೋ.. ಸೋಪು, ಹ್ಯಾಂಡ್-ವಾಶ್ ಬಿಡು. ಸೀಗೇಕಾಯಿ ಪುಡಿಯಲ್ಲೋ, ಕಡ್ಲೆ ಹಿಟ್ಟಲ್ಲೋ ಕೈ ತೊಳಿ. 1 ತಿಂಗಳಲ್ಲಿ ಸಮಸ್ಯೆ ಸರಿಹೋಗುತ್ತೆ ಅಂದೆ. ನನ್ನ ಹಠಕ್ಕೆ ಮಣಿದು ಆಸ್ಪತ್ರೆಯಿಂದ ಹೊರಬಂದ ಸ್ನೇಹಿತ ದಿನಚರಿ ಬದಲಿಸಿದ. ರೋಗ ವಾಸಿಯಾಯಿತು. ಭ್ರಾಂತಿಗಳನ್ನು ಬಿಟ್ಟು ಬದುಕಲಾರಂಭಿಸಿದ. ಇತ್ತೀಚೆಗೆ ಮತ್ತೆ ಕರೆ ಮಾಡಿ, ಒಂದು ವಿಚಾರ ಸ್ಪಷ್ಟವಾಯ್ತು ಅಂದ. ಏನಾಯ್ತು? ಎಂದೆ ಅಚ್ಚರಿಯಿಂದ. ರೋಗಗಳ ಮೂಲ ಮನಸ್ಸು ಮತ್ತು ಮನಸ್ಸಿನಲ್ಲಿ ಗೂಡು ಕಟ್ಟುವ ಭ್ರಾಂತಿಗಳು ಎಂಬುದು ಗೊತ್ತಾಯ್ತು. ನಮ್ಮ ಆರೋಗ್ಯಕ್ಕೆ ಮಾರಕವಾದ ಬ್ಯಾಕ್ಟೀರಿಯಾಗಳ ನಾಶ ಮಾಡುವ ಭರದಲ್ಲಿ ಪೂರಕವಾದ ಬ್ಯಾಕ್ಟೀರಿಯಾಗಳ ಮಾರಣಹೋಮವನ್ನೂ ಮಾಡುತ್ತಿದ್ದೆ ಎಂಬ ತಪ್ಪಿನ ಅರಿವಾಯ್ತು, ಅಂದ. ನಕ್ಕು ಫೋನಿಟ್ಟೆ.

ಉದ್ಯೋಗನಿಮಿತ್ತ ಮಾಯಾನಗರಿ ಬೆಂದಕಾಳೂರಲ್ಲಿ ಹಲವು ವರ್ಷ ಬೆಂದವನು ನಾನು. ಮನೆ ಹೊಸಿಲು ದಾಟಿದರೆ ಕಾಲುಗಳಿಗೆ ಮಣ್ಣಾಗಬಾರದು. ಮಣ್ಣಾದರೆ ರೋಗಗಳು ಬರುತ್ತವೆ ಎಂಬ ಭ್ರಾಂತಿಯಲ್ಲಿ ಇಂಟರ್ಲಾಕೋ, ಕಾಂಕ್ರೀಟೋ ಹಾಸಿದ ಮನೆಯಂಗಳಗಳನ್ನು ಕಂಡಾಗ ಮನಸ್ಸು ಅಯ್ಯೋ ಶಿವನೇ ಎಂದು ಮುದುಡುತ್ತದೆ. ಬೀಳುವ ನಾಲ್ಕು ಹನಿ ಮಳೆನೀರಿಗೂ ಇಂಗಲು ಜಾಗವಿಲ್ಲದಂತೆ ಬೆಳೆದ ಕಾಂಕ್ರೀಟು ಕಾಡಲ್ಲಿ ಕಿರಿದಾದ ಚರಂಡಿಗಳು. ಮಳೆ ಸುರಿದಾಗ ನೀರು ಹರಿಯಲು ಜಾಗವಿಲ್ಲದೆ ಚರಂಡಿ ತುಂಬಿ, ಸಕಲ ಟಾಯ್ಲೆಟ್ ತೀರ್ಥಗಳೂ ಅದರಲ್ಲಿ ಸೇರಿ ಮನೆಗಳೊಳಗೆ ನುಗ್ಗುತ್ತದೆ. ಅಯ್ಯೋ ಮಳೆ ನೀರು ಮನೆಗೆ ನುಗ್ತು ಕಣ್ರೀ ಅಂತ ಬಯ್ಯುತ್ತಾ, ವರುಣದೇವನಿಗೆ ಹಿಡಿಶಾಪ ಹಾಕುತ್ತಾ ಮೊಗೆ-ಮೊಗೆದು ನೀರನ್ನು ಹೊರಚೆಲ್ಲುತ್ತಾರೆ. ಅಲ್ಲಿಗೆ ಮನೆ ಶುದ್ಧವಾಗುತ್ತದೆ. ಹೈಜೆನಿಕ್ ಎಂದು ಕೈತೊಳೆದುಕೊಳ್ಳುತ್ತಾರೆ. ಅದೇ ನೀರಿಂಗಲು ಜಾಗವಿದ್ದಿದ್ದರೆ....!!!!

ದೂರ ಪ್ರಯಾಣ ಮಾಡುವಾಗ ಕೆಂಪು ಬಸ್ಸಿನಲ್ಲಿ ಕಿಟಕಿಗಳನ್ನು ತೆರೆದು ಹಾಯಾಗಿ ಕುಳಿತು ಪ್ರಯಾಣಿಸುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಆದ್ರೆ ಬಹಳಷ್ಟು ಜನಕ್ಕೆ ಎಸಿ ಬಸ್ಸೇ ಆಗ್ಬೇಕು. ಕೇಳಿದ್ರೆ ಹೈಜೆನಿಕ್ ಆಗಿರುತ್ತೆ, ಟ್ರಾವೆಲಿಂಗ್ ಸುಸ್ತಾಗೋಲ್ಲ, ಹೈ-ಫೈ ಬಸ್ಸಲ್ಲಿ ಕೂಲಾಗಿ ಕುಳಿತು ಹೋಗೋದೇ ಮಜಾ ಅಂತಾರೆ! ಪಾಪ ಅವರೆಲ್ಲ ಒಂದು ವಿಚಾರ ಅರ್ಥವೇ ಮಾಡಿಕೊಳ್ಳೋಲ್ಲ. ಎಸಿ ಬಸ್ಸಿನಲ್ಲಿ ಹೊರಗಿನ ಗಾಳಿ ಒಳ ಪ್ರವೇಶಿಸುವುದಿಲ್ಲ. ಒಳಗಡೆ ಇರುವ ಗಾಳಿಯೇ, ಅರ್ಥಾತ್ ಪ್ರಯಾಣಿಕರೆಲ್ಲರೂ ಉಸಿರಾಡಿ ಬಿಟ್ಟ ಗಾಳಿಯನ್ನೇ ಮತ್ತೆ ಮತ್ತೆ ಉಸಿರಾಡಬೇಕು ಎಂಬ ಸತ್ಯ! ವಿಸರ್ಜಿತ ಗಾಳಿ (ಅಪಾನ ವಾಯು) ಕೂಡಾ ಅದರಲ್ಲಿ ಸೇರುತ್ತೆ ಅನ್ನೋ ಸತ್ಯ! ಹಾಗಿದ್ದರೆ ಪ್ರಕೃತಿಯಲ್ಲಿ ಈ ಸಮಸ್ಯೆ ಇಲ್ಲವೇ ಅಂತ ಮೊಂಡುವಾದ ಮಾಡುವವರು ಇರಬಹುದು. ಸಾರಗದ ಜಲರಾಶಿಗೆ ಎಷ್ಟೇ ಸಿಹಿ ನೀರು ಎರೆದರೂ ಆ ನೀರು ಸಿಹಿಯಾದೀತೇ? ಹಾಗೆಯೇ ಪ್ರಕೃತಿ. ಪ್ರಕೃತಿಯಲ್ಲಿನ ಗಾಳಿಗೂ ತನ್ನನ್ನು ತಾನೇ ಸ್ವಚ್ಛ ಮಾಡಿಕೊಳ್ಳುವ ಶಕ್ತಿಯಿದೆ. ಅದಕ್ಕಾಗಿ ಮರ-ಗಿಡಗಳ ಆಸರೆಯಿದೆ. ಅದೇ ಎಸಿ ವಾಹನದೊಳಗೆ ಉಸಿರಾಡುವುದು....!!!

ನಮ್ಮೂರಿನ ಭಯಂಕರ ಫೇಮಸ್ ವ್ಯಕ್ತಿ ರಾಮಣ್ಣ. ಇತ್ತೀಚೆಗೆ ಅವರ ಮಗನ ಮದುವೆ ಸಮಾರಂಭ. ಹೋಗದಿದ್ದರೆ ಆದೀತೇ? ಬೆಳಗ್ಗಿನ ಉಪಾಹಾರದ ಹೊತ್ತಿಗೇ ಹೋದೆ. ಅಡುಗೆಯವರು, ಬಡಿಸುವವರು ಎಲ್ಲರಿಗೂ ತಲೆಗೊಂದು ಟಿಶ್ಯೂ ಪೇಪರಿನ ಟೋಪಿ, ಕೈಗೊಂದು ಪ್ಲಾಸ್ಟಿಕ್ಕಿನ ಗ್ಲೌಸ್. ರಾಮಣ್ಣನ ಪೂರ್ತಿ ಕುಟುಂಬವೇ ಹೈಜೆನಿಕ್ ಭ್ರಾಂತಿಯದ್ದು ಎಂಬ ಅರಿವಿದ್ದ ನನಗೆ ಇದನ್ನು ನೋಡಿ ಅಚ್ಚರಿಯೇನೂ ಆಗಲಿಲ್ಲ. ಅಭ್ಯಾಗತರೆಲ್ಲರೂ ರಾಮಣ್ಣನಿಗೆ ಬಹುಪರಾಕ್ ಹೇಳುತ್ತಿದ್ದರು. ಅದೆಷ್ಟು ಕ್ಲೀನ್ಲಿನೆಸ್ ಮೇಂಟೇನ್ ಮಾಡಿದ್ದಾರೆ ಎಂದು ಹುಬ್ಬು ಮೇಲೇರಿಸುತ್ತಿದ್ದರು. ಪಕ್ಕದಲ್ಲಿ ಕುಳಿತ ವಯಸ್ಕರೊಬ್ಬರು ಮೆತ್ತಗೆ ನನ್ನ ಕಿವಿಯಲ್ಲಿ, ಪ್ಲಾಸ್ಟಿಕ್ಕಿನಲ್ಲಿ ಇರುವಷ್ಟು ರೋಗಾಣುಗಳು ಮನುಷ್ಯರ ಕೈಯಲ್ಲಿ ಇರಲಿಕ್ಕಿಲ್ಲವೇನೋ? ಮೊದಲೇ ಪ್ಲಾಸ್ಟಿಕ್ ವಿಷಕಾರಿ. ಇನ್ನು ಅದನ್ನು ತಯಾರು ಮಾಡೋ ಜಾಗ, ಅದನ್ನು ಅಂಗಡಿಗಳಿಗೆ ಪಾರ್ಸೆಲ್ ಮಾಡುವ ರೀತಿ, ಅಂಗಡಿಗಳಲ್ಲಿ ಅದನ್ನು ದಾಸ್ತಾನು ಮಾಡುವ ಜಾಗ... ಇಲ್ಲಿಂದೆಲ್ಲ ಅದೆಷ್ಟು ರೊಗಾಣುಗಳು ಈ ಪ್ಲಾಸ್ಟಿಕ್ ಗ್ಲೌಸಿನಲ್ಲಿ ಸೇರಿರಲಿಕ್ಕಿಲ್ಲ, ಅಲ್ಲವೇ? ಎಂದರು. ಅತಿಯಾಗಿ ಕಲಿತವರಿಗೆ ಅದೆಲ್ಲ ಗೊತ್ತಾಗೋಲ್ಲ... ಎಂದೆ.

ಅಡುಗೆಯ ಕಿಟ್ಟಣ್ಣ ನನ್ನ ದೋಸ್ತಿ. ಪಾಕಶಾಲೆಗೆ ಪ್ರವಾಶವಿಲ್ಲ ಎಂಬ ಬೋರ್ಡ್ ಇದ್ದರೂ ಕಿಟ್ಟಣ್ಣನಲ್ಲಿ ಮಾತಾಡಬೇಕೆಂದು ಒಳನುಗ್ಗಿದೆ. ಕಿಟ್ಟಣ್ಣ ದೊಡ್ಡ ಪಾತ್ರೆಯೊಳಗೆ ತಲೆ ನುಗ್ಗಿಸಿ ಅದೇನೋ ಹುಡುಕುತ್ತಿದ್ದರು. ಏನು ಕಿಟ್ಟಣ್ಣ ಬಂಗಾರ ಏನಾದ್ರೂ ಹುಡುಕ್ತಾ ಇದ್ದೀರಾ? ಎಂದೆ. ಏನಿಲ್ಲ, ದೊಡ್ಡ ಮನುಷ್ಯರು ಲೋ ಕ್ವಾಲಿಟಿ ಅಕ್ಕಿ ತಂದಿದ್ದಾರೆ. ಫುಲ್ ಹುಳ ಆಗಿದೆ. ಕಣ್ಣಿಗೆ ಕಾಣೋದನ್ನಾದ್ರೂ ಹುಡುಕಿ ತೆಗೆಯೋಣ ಅಂತ ಹುಡುಕ್ತಾ ಇದ್ದೀನಿ. ಏನ್ ಮಾಡೋದು ನಮ್ಮ ಕರ್ಮ. ಇವ್ರದ್ದೆಲ್ಲ ತೋರಿಕೆಗೆ ಆಡಂಭರ... ಎಂದು ಅಲವತ್ತುಕೊಂಡ. ಅಂತೂ ಮದುವೆ ಮುಗೀತು. ಊಟಕ್ಕೆ ರೆಡಿಯಾಯ್ತು. ಟೇಬಲ್ಲಿನ ಮೇಲೆ ಪೇಪರ್ ರೋಲ್ ಹರಡಿ ಅದರ ಮೇಲೆ ಬಾಳೆಲೆ ಹಾಕಿದ್ದರು. ಪೇಪರಿನ ಗಬ್ಬು ವಾಸನೆಗೆ ಖಾದ್ಯದ ಪರಿಮಳ ಸಪ್ಪೆಯಾಯ್ತು. ಅದೆಷ್ಟು ರೋಗಾಣುಗಳು ಈ ಪೇಪರ್ ರೋಲಿನಲ್ಲಿದ್ದವೋ? ಹೈಜೆನಿಕ್ ಊಟ ಮುಗಿಸಿ ಮನೆ ತಲುಪಿದ್ದಾಯ್ತು.

ಮರುದಿನ ಸಂಜೆ ಯಾವುದೋ ಕಾರಣಕ್ಕೆ ಪೇಟೆಯ ಕಡೆ ಹೋಗಿದ್ದೆ. ಉದ್ದಕ್ಕೆ ನಡೆದುಕೊಂಡು ಹೋಗಿತ್ತಿದ್ದೇನೆ... ಎದುರಿಗೆ ರಾಮಣ್ಣನ ಸಂಸಾರ, ಹೊಸ ಮದುಮಗಳ ಸಮೇತ. ಇವ್ರು ಏನು ಮಾಡ್ತಿದ್ದಾರೆ ನೋಡೋಣ ಎಂದು ಮೆತ್ತಗೆ ಅವರನ್ನೇ ಹಿಂಬಾಲಿಸಿದೆ. ಎದುರುಗಡೆಯೇ ಕಾಣುತ್ತಿದೆ ಮಸಾಲೆ ಪೂರಿಯ ಗಾಡಿ. ಅಲ್ಲೇ ನಿಂತಿತು ರಾಮಣ್ಣನ ಸಂಸಾರ. ಬಗೆ ಬಗೆಯ ಚಾಟ್ಸ್ ರಾಮಣ್ಣನ ಸಂಸಾರದ ಹೊಟ್ಟೆ ಸೇರಿದವು. ರಾಮಣ್ಣ ನೀರು ಬೇಕು ಅಂದ್ರು. ಮಾಸಲೆ ಪೂರಿ ಗಾಡಿಯವ ಪಕ್ಕದಲ್ಲೇ ಇದ್ದ ಪಾಚಿ ಹಿಡಿದಿದ್ದ ಬಿಂದಿಗೆಯಲ್ಲಿ ನೀರು ತಂದ. ಖರೀದಿಸಿದ ನಂತರ ತೊಳೆದೇ ಇಲ್ಲವೇನೋ ಎಂಬಂತೆ ಕಾಣುತ್ತಿದ್ದ, ಪಾಚಿ ಹಿಡಿದ ಪ್ಲಾಸ್ಟಿಕ್ ಜಗ್ಗಿನಲ್ಲಿ ಹಾಕಿ ತಕ್ಕೊಳಿ.. ಅಂತ ಕೊಟ್ಟ. ರಾಮಣ್ಣ ಗಟಗಟನೆ ನೀರು ಕುಡಿದು ಡರ್ರನೆ ತೇಗಿದರು. ಗಾಡಿಯವನು ಟೊಮೇಟೋದಲ್ಲಿನ ಕೊಳೆತ ಭಾಗವನ್ನು ಕತ್ತರಿಸಿ ಎಸೆದು ಉಳಿದದ್ದನ್ನು ಚಕಚಕನೆ ಸಣ್ಣಗೆ ಹೆಚ್ಚತೊಡಗಿದ!!!

Comments

  1. Beautiful article, it's an eye opener for today's world.

    ReplyDelete

Post a Comment

Most Popular

ದ್ವಾದಶಾವತಾರ ಕಾವ್ಯ

ದರುಶನವ ನೀಡು ರಾಜರಾಜೇಶ್ವರಿ

ಐತರೇಯ