ಐತರೇಯ
ಪ್ರಾಚೀನ - ಅರ್ವಾಚೀನಗಳ ಸಂಗಮ
ಭರತ ಭೂಮಿಯ ಸನಾತನ ಪರಂಪರೆಗೆ ತನ್ನದೇ ಆದ ವೈಶಿಷ್ಟ್ಯವಿದೆ. ಇಡೀ ಪ್ರಪಂಚಕ್ಕೆ ಮಹತ್ತಾದ ಜೀವನ ಪಾಠವನ್ನು ಆದರ್ಶ, ನೈತಿಕತೆ, ಮಾನವೀಯತೆಯ ಪರಿಪೂರ್ಣ ಕಲ್ಪನೆಯೊಂದಿಗೆ ಕಟ್ಟಿಕೊಟ್ಟ ಸಂಸ್ಕೃತಿ ನಮ್ಮದು. ಹಲವು ಮಂತ್ರ ದೃಷ್ಟಾರರು, ಋಷಿ ಮುನಿಗಳು ಪ್ರಕೃತಿಯೊಂದಿಗೆ ಸಾಧಿಸಿದ ಪೂಜನೀಯ ಸಂಬಂಧಗಳ ಪ್ರತಿಫಲವಾಗಿ ಪ್ರಕೃತಿಯೂ ಕೂಡ ಆಧುನಿಕ ವಿಜ್ಞಾನಕ್ಕೆ ಸಮಾನವಾದ ಬಹಳಷ್ಟು ಒಳಗುಟ್ಟುಗಳನ್ನು ತರಂಗಾಂತರಗಳ ಮೂಲಕ ಅವರ ದಿವ್ಯದೃಷ್ಟಿಗೆ ಬಿಟ್ಟುಕೊಟ್ಟಿತು. ಅದನ್ನು ಉಪಯೋಗಿಸಿಕೊಂಡ ನಮ್ಮ ಪೂರ್ವಜರು ವೇದ, ಪುರಾಣ, ಪ್ರಾಚೀನ ಇತಿಹಾಸ, ಶಾಸ್ತ್ರ ಇತ್ಯಾದಿಗಳ ಮುಖಾಂತರ ತಮ್ಮ ಮುಂದಿನ ಪೀಳಿಗೆಗೆ ಧಾರ್ಮಿಕ ಪರಿಭಾಷೆಯೊಂದಿಗೆ ವರ್ಗಾಯಿಸಿದರು.
ಅವುಗಳಲ್ಲಿ ಪ್ರಮುಖವಾದ ವೇದದ ಅಂಗ ಉಪನಿಷತ್ತುಗಳು. ಋಗ್ವೇದದ ಉಪನಿಷತ್ತಾದ ಐತರೇಯ ಉಪನಿಷತ್ತು ಇವುಗಳಲ್ಲಿ ಬಹುಮುಖ್ಯವಾದುದು. ಐತರೇಯ ಉಪನಿಷತ್ತಿನಲ್ಲಿ ಆಧುನಿಕ ವಿಜ್ಞಾನಕ್ಕೆ ಪೂರಕವಾಗುವ ಹಲವಾರು ಸಂಗತಿಗಳಿವೆ. ಇದೊಂದು ರೀತಿ ಪ್ರಾಚೀನ - ಅರ್ವಾಚೀನಗಳ ಸಂಗಮವೇ ಸರಿ. ಈ ವಿಚಾರವನ್ನು ಕಂಡುಕೊಂಡ ನಾವು ಈಗಿನ ಯುವಪೀಳಿಗೆಗೆ ಮೇಲ್ಕಾಣಿಸಿದ ವಿಷಯಗಳನ್ನು ಹಸ್ತಾಂತರಿಸಿ ಬೌದ್ಧಿಕವಾಗಿ ಅವರನ್ನು ಶ್ರೀಮಂತಗೊಳಿಸುವ ತನ್ಮೂಲಕ ಯುವ ಸಮಾಜವನ್ನು ಸನ್ಮಾರ್ಗದ ಜ್ಞಾನದೆಡಗೆ ಕೊಂಡೊಯ್ಯುವ ಸಂಕಲ್ಪವನ್ನಿಟ್ಟುಕೊಂಡು ನಮ್ಮದೊಂದು ಅಳಿಲ ಸೇವೆ ಎಂಬ ಯತ್ಕಿಂಚಿತ್ ಭಾವನೆಯೊಂದಿಗೆ " ಐತರೇಯ" ಎಂಬ ನೂತನ ಬ್ಲಾಗ್ ಒಂದನ್ನು ಪ್ರಾರಂಭಿಸುವುದರೊಂದಿಗೆ ಇದಕ್ಕೊಂದು ಲಾಂಛನವನ್ನು ಮಾಡಿದ್ದೇವೆ.
ಹಸಿರು ಸಮೃದ್ಧಿಯ ಸಂಕೇತ ಹಾಗೂ ಭೂತತ್ವದ ವರ್ಣವೂ ಹೌದು. ಇಡೀ ಪ್ರಪಂಚವು ಪರಿಪೂರ್ಣ ಜ್ಞಾನದೆಡೆಗೆ ಮುಖ ಮಾಡಿ ಸಮೃದ್ಧಿಯ ಕಡಲಲ್ಲಿ ತೇಲಬೇಕೆಂಬ ಕಲ್ಪನೆಯೊಂದಿಗೆ ಹೊರಾವರಣದಲ್ಲಿ ಹಸಿರು ವರ್ಣವನ್ನು ಬಳಸಿಕೊಳ್ಳಲಾಗಿದೆ. ಕೃಷ್ಣನ ಕಡುನೀಲ ವರ್ಣ ಪರಿಪೂರ್ಣ ಜ್ಞಾನದ ಸಂಕೇತವಾದರೆ ಒಳಾವರಣದಲ್ಲಿ ನಾವು ಬಳಸಿಕೊಂಡಿರುವ ನಸುನೀಲಿ ವರ್ಣವು ಜ್ಞಾನದೆಡೆಗೆ ಮುಖ ಮಾಡಿ ನಿಂತಿರುವ ಪ್ರಪಂಚದ ಕಲ್ಪನೆ.
ಎಲ್ಲ ವೇದ ಶಾಸ್ತ್ರಗಳನ್ನು ವಿಂಗಡಿಸಿ ಜನ ಸಾಮಾನ್ಯರಿಗೂ ಸರಳವಾಗಿ ಅರ್ಥವಾಗುವಂತೆ ಮಾಡಿಕೊಟ್ಟ ಭಗವಾನ್ ವ್ಯಾಸ ಮಹರ್ಷಿಗಳನ್ನು ಗೌರವಿಸುವ ಸಲುವಾಗಿ ವ್ಯಾಸಪೀಠ ಬಳಸಲಾಗಿದೆ. ಸನಾತನಿಗಳು ಮೂಲತಃ
ಜ್ಞಾನಪಿಪಾಸುಗಳು. ಜ್ಞಾನಾಭಿವೃದ್ಧಿಗೆ ಪೂರಕವಾದ ಧೀಶಕ್ತಿಯನ್ನು ಉತ್ತೇಜಿಸುವ ಪ್ರಖರವಾದ
ಅಂಶಗಳು ಸೂರ್ಯನ ಕಿರಣಗಳಲ್ಲಿರುವುದನ್ನು ಅರಿತುಕೊಂಡ ಅವರು ಸೂರ್ಯನನ್ನು ತಮ್ಮ ಆರಾಧ್ಯ ದೇವನಾಗಿ
ಪೂಜಿಸುತ್ತಿದ್ದರು. ಅದರೊಂದಿಗೆ ತ್ಯಾಗದ ಸಂಕೇತವಾದ ಕೇಸರೀ ವರ್ಣವನ್ನು ಅರುಣೋದಯದ ಸಮಯದಲ್ಲಿ,
ಉಷೋದಯದ ಸಮಯದಲ್ಲಿ ಹಾಗೂ ಸಂಧ್ಯಾ ಸಮಯದಲ್ಲಿ ಸೂರ್ಯನು ಹೊಂದಿರುತ್ತಾನಾದ ಕಾರಣ ಪ್ರಾತಃಕಾಲ ತನ್ನ
ಚಕ್ಷುಗಳಿಂದ ಜಗತ್ತನ್ನು ದಿಟ್ಟಿಸುವ ಸೂರ್ಯನಾರಾಯಣ ದೇವರು ಸಂಧ್ಯಾಕಾಲದಲ್ಲಿ ನಿರ್ಮೋಹಿಯಾಗಿ
ಜಗತ್ತನ್ನು ಬಿಟ್ಟು ನಡೆದುಬಿಡುತ್ತಾನೆ. ಪ್ರಾತಃಕಾಲದ ಅರುಣೋದಯದಲ್ಲಿಯೂ ಸೂರ್ಯಾಸ್ತದ ಸಮಯದಲ್ಲಿಯೂ ತ್ಯಾಗವರ್ಣವಾದ ಕೇಸರಿಯನ್ನೇ ಧರಿಸಿರುವ ಸೂರ್ಯನು ಜ್ಞಾನದ ಪ್ರತಿಬಿಂಬವಾಗಿ,
ಅನಗತ್ಯವಾಗಿ ತನ್ನನ್ನು ಸ್ಪರ್ಶಿಸಲು ಬಂದವರನ್ನು ಸುಡುತ್ತಾ, ತನ್ನನ್ನಾರಾಧಿಸುವವರಿಗೆ
ತಂಪನ್ನೆರೆಯುವ ಅನುಸಂಧಾನದೊಂದಿಗೆ ವ್ಯಾಸಪೀಠದ ಹಿಂಭಾಗದಲ್ಲಿ ಸೂರ್ಯನಾರಾಯಣನನ್ನು
ಕಲ್ಪಿಸಲಾಗಿದೆ.
ವ್ಯಾಸಪೀಠದ ಮೇಲೆ ಹಲವು ವರ್ಣದ ಪುಸ್ತಕವನ್ನಿಟ್ಟಿದ್ದೇವೆ, ಮಧ್ಯದಲ್ಲಿ ನೀಲವರ್ಣದ ಪುಸ್ತಕವು ಇದೆ. ಆಧುನಿಕ ವಿದ್ಯೆ, ವಿಜ್ಞಾನಗಳ ಸಂಕೇತವಾದ ಬೇರೆ ವರ್ಣದ ಪುಸ್ತಕಗಳೊಂದಿಗೆ ಜ್ಞಾನದ ಸಂಕೇತವಾದ ಕಡುನೀಲ ವರ್ಣದ ಪುಸ್ತಕವನ್ನು ಸೇರಿಸಿಕೊಂಡು ಮೇಲ್ಭಾಗದಲ್ಲಿ ನಮ್ಮ ಪೂರ್ವಜರು ಪ್ರಾಕೃತಿಕವಾಗಿ ಸಿಗುವ ಮಸಿಯನ್ನು ಬಳಸಿ ಹಕ್ಕಿಯ ರೆಕ್ಕೆಗಳ ಗರಿಯಿಂದ ಬರೆಯುತ್ತಿದ್ದ ಕಾರಣದಿಂದ ಐತರೇಯ ಉಪನಿಷತ್ತನ್ನು ಹಾಗೇ ಬರೆದಿರಬಹುದೆಂಬ ನಮ್ಮ ಸೀಮಿತ ಜ್ಞಾನದ ಪರಿಧಿಯಲ್ಲಿ ಆ ಗರಿಯಲ್ಲಿಯೇ ಐತರೇಯ ಎಂಬ ಹೆಸರನ್ನು ಸೇರಿಸಿಕೊಂಡು ಪ್ರಾಚೀನ - ಅರ್ವಾಚೀನಗಳ ಸಂಗಮ ಎಂಬ ಉದ್ಘೋಷ ವಾಕ್ಯದೊಂದಿಗೆ ಈ ಲಾಂಛನವನ್ನು ರಚಿಸಲಾಗಿದೆ.

Comments
Post a Comment